ಅನಿಸಿಕೆ

ಪದಕಣಜದ ಬಗ್ಗೆ


ಡಿಜಿಟಲ್‌ ಯುಗದಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸುವ ಹಿನ್ನೆಲೆಯಲ್ಲಿ 'ಇ - ಕನ್ನಡ' ಕನ್ನಡದ ಜ್ಞಾನ ಮತ್ತು ತಂತ್ರಜ್ಞಾನದ ಮಾಹಿತಿ ನೀಡುವ ಜಾಲತಾಣ ವೇದಿಕೆಯನ್ನು ರೂಪಿಸಲಾಗಿದೆ. ಈ ಯೋಜನೆಯ ಭಾಗವಾಗಿ ಕನ್ನಡದ ನಿಘಂಟುಗಳು ಮತ್ತು ಪದಕೋಶಗಳನ್ನು ಸಾರ್ವಜನಿಕ ಬಳಕೆಗೆ ದೊರಕಿಸಲು "ಪದಕಣಜ" ಜಾಲತಾಣವನ್ನು ಆರಂಭಿಸಲಾಗಿದೆ.

"ಪದಕಣಜ" ಜಾಲತಾಣದಲ್ಲಿ ಸಾರ್ವಜನಿಕರು ಸಂಗ್ರಹಿತ ಕನ್ನಡ ಅಥವಾ ಇಂಗ್ಲೀಷ್‌ ಪದಕ್ಕೆ ಅರ್ಥಗಳನ್ನು ಪಡೆಯಬಹುದು. ಈಗಾಗಲೇ ಪ್ರಕಟವಾಗಿರುವ ಹಲವು ಪ್ರಮುಖ ನಿಘಂಟು - ಪದಕೋಶಗಳನ್ನು ವಾಣಿಜ್ಯೇತರ ಶೈಕ್ಷಣಿಕ ಮತ್ತು ಸಂಶೋಧನಾ ಬಳಕೆಗಾಗಿ ನೀಡಲು ಅನುಮತಿ ಪಡೆದು ಇಲ್ಲಿ ಹಂತಹಂತವಾಗಿ ಪ್ರಕಟಿಸಲಾಗುತ್ತಿದೆ. ಒಂದು ಪದಕ್ಕೆ ವಿವಿಧ ನಿಘಂಟು - ಪದಕೋಶಗಳಲ್ಲಿ ಇರುವ ಅರ್ಥಗಳನ್ನು ಇಲ್ಲಿ ಪಟ್ಟೀಕರಿಸಿ ನೀಡಲಾಗುತ್ತದೆ.

ಈ ಸಂಗ್ರಹದಲ್ಲಿ ಇಲ್ಲದ ಪದವನ್ನು ಸಾರ್ವಜನಿಕರು, ಕನ್ನಡ ಶಿಕ್ಷಕರು - ಯಾವುದೇ ಬಳಕೆದಾರರು ಇಲ್ಲಿ ಕೊಡುಗೆಯಾಗಿ ನೀಡಬಹುದು. ಅಂತಹ ಹೊಸ ಪದಗಳನ್ನು ಸರ್ಕಾರವು ರಚಿಸಿದ ತಜ್ಞರ ಸಮಿತಿಯ ಮುಂದಿಟ್ಟು ಅನುಮೋದನೆ ಪಡೆದು ಪ್ರಕಟಿಸಲಾಗುತ್ತದೆ.

ಆಡಳಿತದಲ್ಲಿ ಕನ್ನಡ ಅನುಷ್ಠಾನ ಮಾಡಬೇಕಿರುವ ಹಿನ್ನೆಲೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ, ವಿವಿಧ ತಂತ್ರಾಂಶಗಳಲ್ಲಿ ಬಳಸಬೇಕಾದ ಕನ್ನಡ ಪದಗಳನ್ನು ಇಲ್ಲಿ ಆಡಳಿತಾತ್ಮಕ ಪದಗಳೆಂದು ವರ್ಗೀಕರಿಸಿ ನೀಡಲಾಗುತ್ತದೆ.

ಇರುವ ಜ್ಞಾನದ ಸಂಗ್ರಹವನ್ನು ವಿಸ್ತರಿಸುತ್ತ, ಹೊಸ ಜ್ಞಾನವನ್ನು ಸೃಷ್ಟಿಸುವ ಉದ್ದೇಶದಿಂದ ಆರಂಭವಾಗಿರುವ "ಪದಕಣಜ" ಜಾಲತಾಣವನ್ನು ತಾವೆಲ್ಲರೂ ಸದ್ಬಳಕೆ ಮಾಡಿಕೊಳ್ಳಲು ಕೋರುತ್ತಿದ್ದೇವೆ.

ಡಿಜಿಟಲ್‌ ವೇದಿಕೆಗಳಲ್ಲಿ ಕನ್ನಡದ ಕಂಪು ಹರಡಬೇಕು, ಎಲ್ಲ ಕನ್ನಡಿಗರೂ ಕನ್ನಡದ ಬಳಕೆಯನ್ನು ಹೆಚ್ಚಿಸುತ್ತ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂಬ ಆಶಯ ನಮ್ಮದಾಗಿದೆ.

ಸಿರಿಗನ್ನಡಂ ಗೆಲ್ಗೆ!