A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 318

Backtrace:

File: /Appdata/padakanaja.karnataka.gov.in/application/controllers/Dictionary.php
Line: 318
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 319

Backtrace:

File: /Appdata/padakanaja.karnataka.gov.in/application/controllers/Dictionary.php
Line: 319
Function: _error_handler

File: /Appdata/padakanaja.karnataka.gov.in/index.php
Line: 318
Function: require_once

A PHP Error was encountered

Severity: Notice

Message: Trying to access array offset on value of type null

Filename: controllers/Dictionary.php

Line Number: 320

Backtrace:

File: /Appdata/padakanaja.karnataka.gov.in/application/controllers/Dictionary.php
Line: 320
Function: _error_handler

File: /Appdata/padakanaja.karnataka.gov.in/index.php
Line: 318
Function: require_once

Padakanaja - Dictionary View
ಅನಿಸಿಕೆ

ಪದಕೋಶ: ಕಂಪ್ಯೂಟರ್ ತಂತ್ರಜ್ಞಾನ ಪದವಿವರಣ ಕೋಶ | ಇಂಗ್ಲೀಷ್-ಕನ್ನಡ |ಪ್ರಕಾಶಕರು - ಕನ್ನಡ ಅಭಿವೃದ್ಧಿ ಪ್ರಾಧಿಕಾರ (2017)

Show entries
ಕ್ರಮ ಸ೦ಖ್ಯೆ ಇಂಗ್ಲೀಷ್ ಪದ
(English Word)
ಕನ್ನಡ ಪದ
(Kannada Word)
ಕನ್ನಡ ಅರ್ಥ
(Kannada Meaning)
ವಿಷಯ ವರ್ಗೀಕರಣ
(Word Subject)
ವ್ಯಾಕರಣ ವಿಶೇಷ
(Word Grammer)
ಕನ್ನಡ ಉಚ್ಚಾರಣೆ
(Kannada Pronunciation)
ಪರ್ಯಾಯ ಪದ
(Word Synonyms)
ಇಂಗ್ಲೀಷ್ ಅರ್ಥ
(English Meaning)
ಸಂಕ್ಷಿಪ್ತ ವಿವರಣೆ
(Short Description)
ದೀರ್ಘ ವಿವರಣೆ
(Long Description)
ಆಡಳಿತಾತ್ಮಕ ಪದ
(Administrative Word)
1 3D Printing ೩ಡಿ ಪ್ರಿಂಟಿಂಗ್ ಮೂರು ಆಯಾಮದ ವಸ್ತುಗಳ ಮುದ್ರಣವನ್ನು ಸಾಧ್ಯವಾಗಿಸುವ ತಂತ್ರಜ್ಞಾನ ಕಂಪ್ಯೂಟರಿಗೊಂದು ಪ್ರಿಂಟರ್ ಜೋಡಿಸಿ ಬೇಕಾದ ಕಡತವನ್ನು ಕಾಗದದ ಮೇಲೆ ಮುದ್ರಿಸಿಕೊಳ್ಳುವುದು ನಮಗೆಲ್ಲ ಗೊತ್ತು. ಇಲ್ಲಿ ನಮ್ಮ ಕೈಗೆ ಬರುವ ಮುದ್ರಿತ ಪ್ರತಿ (ಪ್ರಿಂಟ್-ಔಟ್) ಎರಡು ಆಯಾಮದ್ದು. ಇದೇ ರೀತಿಯಲ್ಲಿ ಮೂರು ಆಯಾಮದ ಪ್ರಿಂಟ್-ಔಟ್‌ಗಳನ್ನೂ ಪಡೆಯಲು ಸಾಧ್ಯವಾಗಿಸುವ ತಂತ್ರಜ್ಞಾನವೇ ೩ಡಿ ಪ್ರಿಂಟಿಂಗ್. ಇಲ್ಲಿ ಪಠ್ಯವನ್ನೋ ಚಿತ್ರವನ್ನೋ ಮುದ್ರಿಸಿಕೊಳ್ಳುವ ಬದಲಿಗೆ ನಮಗೇನು ಬೇಕೋ ಅದನ್ನೇ ತಯಾರಿಸಿಕೊಂಡುಬಿಡುವುದು ಸಾಧ್ಯ. ರಿಮೋಟ್ ಕಂಟ್ರೋಲಿನ ಮುರಿದುಹೋಗಿರುವ ಭಾಗವಾದರೂ ಸರಿ, ಬಿರುಕುಬಿಟ್ಟಿರುವ ಮೊಬೈಲ್ ಕವಚವಾದರೂ ಸರಿ; ಅದರ ವಿನ್ಯಾಸದ ವಿವರಗಳನ್ನು ಸೂಕ್ತ ತಂತ್ರಾಂಶದ ಮೂಲಕ ೩ಡಿ ಮುದ್ರಣಯಂತ್ರಕ್ಕೆ ಒಪ್ಪಿಸಿದರೆ ಸಾಕು, ಅದು ಹೊಸ ಭಾಗವನ್ನು ಸೃಷ್ಟಿಸಿಕೊಟ್ಟುಬಿಡುತ್ತದೆ. ಕಾಗದದ ಮೇಲೆ ಮುದ್ರಿಸುವ ಮುದ್ರಣಯಂತ್ರ ಬಣ್ಣದ ಇಂಕು ಬಳಸಿದಂತೆ ಬಹುತೇಕ ೩ಡಿ ಪ್ರಿಂಟರುಗಳಲ್ಲಿ ಪ್ಲಾಸ್ಟಿಕ್ ಬಳಕೆಯಾಗುತ್ತದೆ; ಬಣ್ಣದ ಹನಿಗಳು ಕಾಗದದ ಮೇಲೆ ಅಕ್ಷರ-ಚಿತ್ರಗಳನ್ನು ರೂಪಿಸಿದ ಹಾಗೆ ಪ್ಲಾಸ್ಟಿಕ್ಕಿನ ಹನಿಗಳು ೩ಡಿ ಪ್ರಿಂಟರಿನ ಮೂಲಕ ಹೊರಬಂದು ಜೋಡಣೆಯಾಗಿ ನಮಗೆ ಬೇಕಾದ ವಸ್ತುವನ್ನು ಮೂರು ಆಯಾಮಗಳಲ್ಲಿ ರೂಪಿಸಿಕೊಡುತ್ತವೆ. ಕಾಗದದ ಮೇಲೆ ಮುದ್ರಿಸುವ ಯಂತ್ರದಲ್ಲಿ ಬಣ್ಣವನ್ನು ಹೊರಸೂಸುವ ಭಾಗ ಕಾಗದದ ಮೇಲೆ ಒಂದೇ ನೇರದಲ್ಲಿ ಚಲಿಸುವಂತಿದ್ದರೆ ಸಾಕು. ಆದರೆ ೩ಡಿ ಪ್ರಿಂಟಿಂಗಿನಲ್ಲಿ ಹಾಗಲ್ಲ - ಪ್ಲಾಸ್ಟಿಕ್ಕನ್ನು ಹೊರಸೂಸುವ ಭಾಗ ಎಡಕ್ಕೂ ಬಲಕ್ಕೂ ಚಲಿಸುವ ಜೊತೆಗೆ ಮೇಲಕ್ಕೂ ಕೆಳಕ್ಕೂ ಚಲಿಸುತ್ತದೆ (ನಮಗೆ ಬೇಕಾದ ವಸ್ತು ಒಂದು ಫಲಕದ ಮೇಲೆ ರೂಪುಗೊಳ್ಳುತ್ತದಲ್ಲ, ಆ ಫಲಕವೂ ತಿರುಗುತ್ತದೆ). ಹಾಗಾಗಿಯೇ ಪ್ಲಾಸ್ಟಿಕ್ ಪದರಗಳು ಮೂರು ಆಯಾಮಗಳ ಆಕೃತಿಯಾಗಿ ರೂಪುಗೊಳ್ಳುವುದು ಸಾಧ್ಯವಾಗುತ್ತದೆ.
2 404 Not Found ೪೦೪ ನಾಟ್ ಫೌಂಡ್ ವಿಶ್ವವ್ಯಾಪಿ ಜಾಲದಲ್ಲಿ ನಾವು ತೆರೆಯಲು ಬಯಸಿದ ವೆಬ್ ಪುಟ ಅಥವಾ ಕಡತವನ್ನು ತೆರೆಯುವುದು ಸಾಧ್ಯವಾಗದಿದ್ದಾಗ ಕಾಣಿಸಿಕೊಳ್ಳುವ ದೋಷ (ಎರರ್) ಕಂಪ್ಯೂಟರನ್ನು, ಮೊಬೈಲ್ ಫೋನನ್ನು ಬಳಸುವಾಗ ನಾವು ಆಗಿಂದಾಗ್ಗೆ ಹಲವು ದೋಷಗಳನ್ನು (ಎರರ್) ಎದುರಿಸಬೇಕಾಗಿ ಬರುವುದುಂಟು. ತಂತ್ರಾಂಶ - ಯಂತ್ರಾಂಶಗಳಲ್ಲಿನ ಯಾವುದೇ ವೈಫಲ್ಯ ಅಥವಾ ಅವನ್ನು ಬಳಸುವಲ್ಲಿ ನಮ್ಮದೇ ತಪ್ಪು ಇಂತಹ ದೋಷಗಳಿಗೆ ಕಾರಣವಾಗಬಹುದು. ಕೆಲ ಬಾರಿ ದೋಷಗಳ ಪರಿಣಾಮವಷ್ಟೇ (ಕಂಪ್ಯೂಟರ್ ಕೆಲಸಮಾಡದಿರುವುದು, ಆಪ್ ತೆರೆದುಕೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದು, ಹೀಗೆ) ನಮ್ಮ ಗಮನಕ್ಕೆ ಬರುತ್ತದೆ, ನಿಜ. ಆದರೆ ಬಹಳಷ್ಟು ಸಂದರ್ಭಗಳಲ್ಲಿ ಅವು ಸಂದೇಶದ ರೂಪದಲ್ಲಿ ನಮ್ಮೆದುರು ಕಾಣಿಸಿಕೊಳ್ಳುತ್ತವೆ. ವಿಶ್ವವ್ಯಾಪಿ ಜಾಲದಲ್ಲಿ ಓಡಾಡುವಾಗ ಕಾಣಸಿಗುವ '೪೦೪', ಇಂತಹ ದೋಷಗಳಲ್ಲೊಂದು. ನಾವು ತೆರೆಯಲು ಬಯಸಿದ ಯಾವುದೇ ವೆಬ್ ಪುಟ ಅಥವಾ ಕಡತವನ್ನು ತೆರೆಯುವುದು ಸಾಧ್ಯವಾಗದಿದ್ದಾಗ ಈ ದೋಷ ಉಂಟಾಗುತ್ತದೆ. ತಾಣದ ವಿಳಾಸ ಬದಲಾದಾಗ, ನಾವು ಅದನ್ನು ತಪ್ಪಾಗಿ ಟೈಪ್ ಮಾಡಿದಾಗ, ನಿರ್ದಿಷ್ಟ ಪುಟ/ಕಡತವನ್ನು ಆ ತಾಣದಿಂದ ತೆಗೆದುಹಾಕಿದಾಗ - ಹೀಗೆ ಈ ದೋಷಕ್ಕೆ ಅನೇಕ ಕಾರಣಗಳಿರಬಹುದು. ಆದರೆ ಇಂತಹ ಪ್ರತಿಯೊಂದು ಸನ್ನಿವೇಶದಲ್ಲೂ ಸಂಬಂಧಪಟ್ಟ ಜಾಲತಾಣ '೪೦೪ ನಾಟ್ ಫೌಂಡ್' ಎನ್ನುವ ಸಂದೇಶವನ್ನು ತೋರಿಸುವುದರಿಂದ ಇದರ ಹೆಸರು ಮಾತ್ರ ಬಳಕೆದಾರರ ನೆನಪಿನಲ್ಲಿ ಭದ್ರವಾಗಿ ಉಳಿದುಕೊಂಡುಬಿಟ್ಟಿದೆ! ಅಂದಹಾಗೆ ನಿರ್ದಿಷ್ಟ ದೋಷಗಳು ಸಂಭವಿಸಿದಾಗ ಅವನ್ನು ಪ್ರತ್ಯೇಕ ಸಂಖ್ಯೆಗಳ (ಸ್ಟೇಟಸ್ ಕೋಡ್) ಮೂಲಕ ಗುರುತಿಸುವುದು ಕಂಪ್ಯೂಟರ್ ಜಗತ್ತಿನ ಸಾಮಾನ್ಯ ಅಭ್ಯಾಸ. ಬಹುತೇಕ ಸನ್ನಿವೇಶಗಳಲ್ಲಿ ಈ ಸಂಖ್ಯೆಯ ಪರಿಚಯ ತಂತ್ರಜ್ಞರಿಗಷ್ಟೇ ಇರುತ್ತದೆ; ಅದನ್ನು ಮೀರಿ ಸಾಮಾನ್ಯ ಬಳಕೆದಾರರಿಗೂ ಪರಿಚಿತವಾಗಿರುವುದು ಈ ೪೦೪ರ ಹೆಚ್ಚುಗಾರಿಕೆ. ಇದರ ಜನಪ್ರಿಯತೆ ಎಷ್ಟರಮಟ್ಟಿನದು ಎಂದರೆ ಏನು ಮಾಡಬೇಕೆಂದು ತೋಚದೆ ಪೆದ್ದುಪೆದ್ದಾಗಿ ಆಡುವವರನ್ನು ('ಕ್ಲೂಲೆಸ್') ೪೦೪ ಎಂದು ಗುರುತಿಸುವ ಅಭ್ಯಾಸವೂ ಇದೆ!
3 Ad blocker ಆಡ್ ಬ್ಲಾಕರ್ ಜಾಲತಾಣಗಳಲ್ಲಿ ಅನಗತ್ಯ ಜಾಹೀರಾತುಗಳು ಕಾಣದಂತೆ ನಿರ್ಬಂಧಿಸಿ ನಮ್ಮ ಜಾಲಾಟವನ್ನು ಸರಾಗವಾಗಿಸುವ ತಂತ್ರಾಂಶ ಜಾಲತಾಣಗಳಲ್ಲಿ ಜಾಹೀರಾತುಗಳ ಹಾವಳಿ ವಿಪರೀತ ಎನ್ನುವುದು ಹಲವರ ಅಭಿಪ್ರಾಯ. ಕೆಲವು ತಾಣಗಳಲ್ಲಂತೂ ಮಾಹಿತಿಗಿಂತ ಹೆಚ್ಚು ಜಾಹೀರಾತೇ ಇರುತ್ತದೆ. ಚಿತ್ರರೂಪದ್ದಷ್ಟೇ ಅಲ್ಲ, ವೀಡಿಯೋ - ಧ್ವನಿ ಮುಂತಾದ ವಿವಿಧ ರೂಪಗಳಲ್ಲೂ ಜಾಹೀರಾತುಗಳು ನಮ್ಮನ್ನು ಕಾಡುತ್ತವೆ. ಅಷ್ಟೇ ಏಕೆ, ಜಾಹೀರಾತುಗಳ ಮೂಲಕ ಕುತಂತ್ರಾಂಶಗಳ ನುಸುಳುವಿಕೆಯೂ ಸಾಧ್ಯ. ಹೀಗೆ ಕಿರಿಕಿರಿ ಮಾಡುವ ಜಾಹೀರಾತುಗಳನ್ನು ನಿರ್ಬಂಧಿಸಿ ನಮ್ಮ ಜಾಲಾಟವನ್ನು ಸರಾಗವಾಗಿಸುವ ತಂತ್ರಾಂಶಗಳನ್ನು 'ಜಾಹೀರಾತು ನಿರ್ಬಂಧಕ', ಅಂದರೆ 'ಆಡ್ ಬ್ಲಾಕರ್'ಗಳೆಂದು ಕರೆಯುತ್ತಾರೆ. ನಾವು ಭೇಟಿಕೊಡಲು ಬಯಸಿರುವ ಪುಟದಲ್ಲಿ ಜಾಹೀರಾತುಗಳನ್ನು ಗುರುತಿಸಿ ಅವು ಮಾತ್ರ ತೆರೆಯದಂತೆ ಮಾಡುವುದು, ಆ ಮೂಲಕ ನಮಗೆ ಆಗುವ ಕಿರಿಕಿರಿಯನ್ನು ತಡೆಯುವುದು ಈ ತಂತ್ರಾಂಶಗಳ ವೈಶಿಷ್ಟ್ಯ. ಆದರೆ ಇಲ್ಲೊಂದು ಸಮಸ್ಯೆಯಿದೆ. ಬಹಳಷ್ಟು ಜಾಲತಾಣಗಳಿಗೆ ಜಾಹೀರಾತುಗಳೇ ಆದಾಯದ ಪ್ರಮುಖ ಮೂಲ (ಲಾಭಾಪೇಕ್ಷೆಯಿಲ್ಲದ, ಜಾಹೀರಾತುಗಳನ್ನು ಪ್ರದರ್ಶಿಸದ ತಾಣಗಳ ಮಾತು ಬೇರೆ). ಜಾಲತಾಣಕ್ಕೆ ಭೇಟಿಕೊಡುವ ನಮ್ಮಂತಹ ಬಳಕೆದಾರರು ಅವರಿಗೆ ಯಾವುದೇ ಶುಲ್ಕ ನೀಡುವುದಿಲ್ಲ; ಇಷ್ಟರ ಮೇಲೆ ಜಾಹೀರಾತುಗಳೂ ಪ್ರದರ್ಶನವಾಗದಂತೆ ತಡೆದರೆ ಆ ತಾಣಗಳು ನಡೆಯುವುದು ಹೇಗೆ? ಹೀಗಾಗಿ ಜಾಹೀರಾತು ನಿರ್ಬಂಧಕ ತಂತ್ರಾಂಶಗಳನ್ನು ಬಳಸುವ ಕಂಪ್ಯೂಟರು ಅಥವಾ ಸ್ಮಾರ್ಟ್‌ಫೋನುಗಳಲ್ಲಿ ತಮ್ಮ ತಾಣವೇ ತೆರೆದುಕೊಳ್ಳದಂತೆ ಮಾಡುವ ನಿಟ್ಟಿನಲ್ಲೂ ಹಲವು ಜಾಲತಾಣಗಳು ಯೋಚಿಸಿವೆ. ಕೊಂಚ ಹಣಕೊಟ್ಟು ನೋಂದಾಯಿಸಿಕೊಂಡ ಗ್ರಾಹಕರಿಗೆ ಜಾಹೀರಾತುಗಳಿಲ್ಲದ ಆವೃತ್ತಿಯನ್ನು ನೀಡುವ ಪ್ರಯತ್ನಗಳೂ ನಡೆದಿವೆ.
4 Adware ಆಡ್‌ವೇರ್ ಜಾಹೀರಾತು ಪ್ರದರ್ಶನವನ್ನೇ ಉದ್ದೇಶವಾಗಿಟ್ಟುಕೊಂಡ ತಂತ್ರಾಂಶ ವಿಶ್ವವ್ಯಾಪಿ ಜಾಲದಲ್ಲಿರುವ ಬಹುತೇಕ ಮಾಹಿತಿಯನ್ನು ಬಳಸಲು ನಾವು ಯಾವುದೇ ಶುಲ್ಕ ನೀಡುವುದಿಲ್ಲವಲ್ಲ, ಹಾಗಾಗಿ ಅನೇಕ ಜಾಲತಾಣಗಳು ಜಾಹೀರಾತುಗಳನ್ನು ಪ್ರದರ್ಶಿಸಿ ಹಣ ಸಂಪಾದಿಸಿಕೊಳ್ಳುತ್ತವೆ. ತಂತ್ರಾಂಶಗಳೂ ಮೊಬೈಲ್ ಆಪ್‌ಗಳೂ ಜಾಹೀರಾತುಗಳನ್ನು ಪ್ರದರ್ಶಿಸುತ್ತವೆ. ಬಳಕೆದಾರರಿಂದ ಯಾವುದೇ ಶುಲ್ಕ ಕೇಳದ ಅದೆಷ್ಟೋ ತಂತ್ರಾಂಶಗಳು ('ಫ್ರೀವೇರ್') ಹಣ ಸಂಪಾದಿಸುವುದೇ ಜಾಹೀರಾತುಗಳ ಮೂಲಕ. ಇವುಗಳ ಜೊತೆಗೆ ಜಾಹೀರಾತು ಪ್ರದರ್ಶನವನ್ನೇ ಕೆಲಸವಾಗಿಟ್ಟುಕೊಂಡ ತಂತ್ರಾಂಶಗಳೂ ಇವೆ. ಬಳಕೆದಾರರ ಕಂಪ್ಯೂಟರನ್ನೋ ಮೊಬೈಲನ್ನೋ ಸೇರಿಕೊಂಡು ಅನಪೇಕ್ಷಿತವಾಗಿ ಜಾಹೀರಾತುಗಳನ್ನು ಪ್ರದರ್ಶಿಸುವುದು, ಬ್ರೌಸರ್ ತೆರೆದ ತಕ್ಷಣ ಯಾವುದೋ ತಾಣವನ್ನು ಪ್ರದರ್ಶಿಸುವುದು, ನಮ್ಮ ಆಯ್ಕೆಯ ಸರ್ಚ್ ಇಂಜಿನ್ ಬದಲು ಬೇರಾವುದೋ ವ್ಯವಸ್ಥೆಯತ್ತ ನಮ್ಮ ಹುಡುಕಾಟವನ್ನು ಮರುನಿರ್ದೇಶಿಸುವುದು - ಇದು ಇಂತಹ ತಂತ್ರಾಂಶಗಳ ಸ್ವರೂಪ. ಈ ತಂತ್ರಾಂಶಗಳನ್ನು 'ಆಡ್‌ವೇರ್'ಗಳೆಂದು ಕರೆಯುತ್ತಾರೆ. ಬಹಳಷ್ಟು ಆಡ್‌ವೇರ್‌ಗಳು ಬಳಕೆದಾರರ ಅರಿವಿಗೆ ಬಾರದಂತೆ ಅವರ ಕಂಪ್ಯೂಟರನ್ನೋ ಮೊಬೈಲ್ ಫೋನನ್ನೋ ಸೇರುವುದರಿಂದ ಅವನ್ನು ಕುತಂತ್ರಾಂಶಗಳ ಗುಂಪಿಗೆ ಸೇರಿಸಬಹುದು. ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯುವ, ಅವರ ಬ್ರೌಸಿಂಗ್ ಅಭ್ಯಾಸವನ್ನು ಗಮನಿಸಿಕೊಳ್ಳುತ್ತ ಪ್ರದರ್ಶಿಸುವ ಜಾಹೀರಾತುಗಳನ್ನು ಅದಕ್ಕೆ ಅನುಗುಣವಾಗಿ ಬದಲಿಸುವ ಆಡ್‌ವೇರ್‌ಗಳೂ ಇವೆ. ಸುಮ್ಮನೆ ಜಾಹೀರಾತುಗಳನ್ನಷ್ಟೇ ಪ್ರದರ್ಶಿಸುವ ಆಡ್‌ವೇರ್‌ನಿಂದ ಕಿರಿಕಿರಿಯಾಗುವುದು ನಿಜವಾದರೂ ಕುತಂತ್ರಾಂಶಗಳಂತೆ ಅದರಿಂದ ಬೇರೆ ಯಾವುದೇ ಹಾನಿ ಆಗುವುದಿಲ್ಲ. ಹೀಗಾಗಿ ಅನೇಕ ಆಡ್‌ವೇರ್‌ಗಳು ಆಂಟಿವೈರಸ್ ತಂತ್ರಾಂಶಗಳ ಕಣ್ತಪ್ಪಿಸುವಲ್ಲಿ ಯಶಸ್ವಿಯಾಗುತ್ತವೆ. ಅವುಗಳ ನಿವಾರಣೆಗೆ ಆಡ್‌ವೇರ್ ನಿರ್ಬಂಧಕ ತಂತ್ರಾಂಶಗಳನ್ನು (ಆಡ್‌ವೇರ್ ರಿಮೂವಲ್ ಟೂಲ್) ಬಳಸಬಹುದು.
5 Affiliate ಅಫಿಲಿಯೇಟ್ ದೊಡ್ಡ ಸಂಸ್ಥೆಯೊಂದರ ಪರವಾಗಿ ಕಾರ್ಯನಿರ್ವಹಿಸುವ, ಅವರ ಉತ್ಪನ್ನಗಳಿಗೆ ಪ್ರಚಾರ ನೀಡುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಅಂತರಜಾಲದ ಮೂಲಕ ವ್ಯವಹರಿಸುವ ಸಂಸ್ಥೆಗಳು ತಮ್ಮ ಉತ್ಪನ್ನಗಳ ಪ್ರಚಾರಕ್ಕೆ ಹಲವು ವಿಧಾನಗಳನ್ನು ಬಳಸುತ್ತವೆ. ದೂರದರ್ಶನದಲ್ಲಿ - ಪತ್ರಿಕೆಗಳಲ್ಲಿ ಜಾಹೀರಾತು ನೀಡುವುದು ಈ ಪೈಕಿ ಒಂದು ವಿಧಾನವಾದರೆ ಸಂಭಾವ್ಯ ಗ್ರಾಹಕರ ಗುಂಪುಗಳನ್ನು ನೇರವಾಗಿ ತಲುಪಲು ಪ್ರಯತ್ನಿಸುವುದು ಇನ್ನೊಂದು ವಿಧಾನ. ಗ್ರಾಹಕರನ್ನು ನೇರವಾಗಿ ತಲುಪುವ ಪ್ರಯತ್ನದ ಒಂದು ರೂಪವೇ ಅಫಿಲಿಯೇಟ್ ಮಾರ್ಕೆಟಿಂಗ್. ದೊಡ್ಡ ಸಂಸ್ಥೆಯೊಂದರ ಪರವಾಗಿ ಕಾರ್ಯನಿರ್ವಹಿಸುವ, ಅವರ ಉತ್ಪನ್ನಗಳಿಗೆ ಪ್ರಚಾರ ನೀಡುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯನ್ನು ಅಫಿಲಿಯೇಟ್ ಎಂದು ಗುರುತಿಸಲಾಗುತ್ತದೆ. ಅಫಿಲಿಯೇಟ್ ಮಾರ್ಕೆಟಿಂಗ್ ತಂತ್ರ ಬಳಸುವ ಸಂಸ್ಥೆಗಳು ತಮ್ಮ ಉತ್ಪನ್ನದ ಪ್ರಚಾರದಲ್ಲಿ ಇಂತಹ ಅಫಿಲಿಯೇಟ್‌ಗಳ ನೆರವು ಪಡೆದುಕೊಳ್ಳುತ್ತವೆ. ಈ ಅಫಿಲಿಯೇಟ್‌ಗಳು ತಮ್ಮ ಬ್ಲಾಗ್, ಜಾಲತಾಣ ಅಥವಾ ಇನ್ನಾವುದೇ ಪ್ರಕಟಣೆಯ ಮೂಲಕ ಸಂಸ್ಥೆಯ ಉತ್ಪನ್ನಗಳಿಗೆ ಪ್ರಚಾರ ದೊರಕಿಸಿಕೊಡುತ್ತಾರೆ, ಆ ಕೆಲಸಕ್ಕಾಗಿ ಒಂದಷ್ಟು ಪ್ರತಿಫಲವನ್ನೂ ಪಡೆದುಕೊಳ್ಳುತ್ತಾರೆ. ಸಾಮಾನ್ಯವಾಗಿ ಈ ಪ್ರತಿಫಲ ತಮ್ಮಿಂದಾಗಿ ಸಂಸ್ಥೆಗೆ ದೊರೆತ ವ್ಯಾಪಾರದ ಒಂದು ಭಾಗವಾಗಿರುತ್ತದೆ (ಕಮೀಶನ್). ಈ ಮೊತ್ತವನ್ನು ಸಂಸ್ಥೆಗಳು ಹಣದ ರೂಪದಲ್ಲೋ, ತಮ್ಮದೇ ತಾಣದಲ್ಲಿ ಬಳಸಬಹುದಾದ ಗಿಫ್ಟ್ ಕೂಪನ್‌ಗಳ ರೂಪದಲ್ಲೋ ನೀಡುತ್ತವೆ. ಯಾವ ಅಫಿಲಿಯೇಟ್ ಮೂಲಕ ಎಷ್ಟು ವ್ಯಾಪಾರ ಸಿಕ್ಕಿದೆ ಎನ್ನುವುದು ಸಂಸ್ಥೆಗಳಿಗೆ ಗೊತ್ತಾಗಬೇಕಲ್ಲ, ಅದಕ್ಕಾಗಿ ಅವು ಪ್ರತಿ ಅಫಿಲಿಯೇಟ್‌ಗೂ ಪ್ರತ್ಯೇಕ ಕೊಂಡಿಗಳನ್ನು (ಲಿಂಕ್) ನೀಡಿರುತ್ತವೆ. ಇವಕ್ಕೆ ಅಫಿಲಿಯೇಟ್ ಲಿಂಕ್ ಎಂದು ಹೆಸರು. ಗ್ರಾಹಕರು ಅಂತಹ ಕೊಂಡಿಗಳ ಮೂಲಕ ಸಂಸ್ಥೆಯ ಜಾಲತಾಣಕ್ಕೆ ಹೋದಾಗ ಅವರು ಯಾವ ಅಫಿಲಿಯೇಟ್ ಮೂಲಕ ಇತ್ತ ಬಂದಿದ್ದಾರೆ ಎನ್ನುವುದು ಸಂಸ್ಥೆಗೆ ಗೊತ್ತಾಗುತ್ತದೆ, ಆ ಗ್ರಾಹಕರು ಮಾಡಬಹುದಾದ ಖರೀದಿಗೆ ಕಮೀಶನ್ ನೀಡುವುದೂ ಸುಲಭವಾಗುತ್ತದೆ. ಅಮೆಜಾನ್, ಫ್ಲಿಪ್‌ಕಾರ್ಟ್ ಸೇರಿದಂತೆ ಹಲವು ದೊಡ್ಡ ಆನ್‌ಲೈನ್ ಅಂಗಡಿಗಳು ನಮ್ಮ ದೇಶದಲ್ಲೂ ಅಫಿಲಿಯೇಟ್ ಮಾರ್ಕೆಟಿಂಗ್ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಇಂತಹ ಪ್ರತಿ ಕಾರ್ಯಕ್ರಮದ ನಿಯಮ-ನಿಬಂಧನೆಗಳು ಬೇರೆಬೇರೆಯಾಗಿರುವುದರಿಂದ ಹೆಚ್ಚಿನ ವಿವರಗಳಿಗೆ ಆಯಾ ಅಫಿಲಿಯೇಟ್ ಕಾರ್ಯಕ್ರಮದ ಜಾಲತಾಣಕ್ಕೆ ಭೇಟಿನೀಡುವುದೇ ಸೂಕ್ತ (ಅಂತಹ ತಾಣಗಳ ವಿವರವನ್ನು ಗೂಗಲ್ ಮೂಲಕ ಪಡೆಯಬಹುದು).
6 Algorithm ಆಲ್ಗರಿದಮ್ ಯಾವುದೇ ಸಮಸ್ಯೆಯನ್ನು ಪರಿಹರಿಸಲು ಕೈಗೊಳ್ಳಬೇಕಾದ ಹೆಜ್ಜೆಗಳ ಸರಣಿ ಪ್ರೋಗ್ರಾಮ್ ಬರೆಯಲು ಹೊರಟಾಗ ಅದರ ಪ್ರತಿಯೊಂದು ಹೆಜ್ಜೆಯನ್ನೂ ಪ್ರತ್ಯೇಕವಾಗಿ ವಿವರಿಸಬೇಕಾಗುತ್ತದೆ. ಇಂತಹ ಹೆಜ್ಜೆಗಳ ಸರಣಿಯೇ ಆಲ್ಗರಿದಮ್. ಪ್ರೋಗ್ರಾಮ್‌ಗೆ ನೀಡಲಾಗುವ ಇನ್‌ಪುಟ್ ಅನ್ನು ಸೂಕ್ತವಾಗಿ ಸಂಸ್ಕರಿಸಿ ನಮಗೆ ಬೇಕಾದ ರೂಪದ ಔಟ್‌ಪುಟ್ ನೀಡುವಂತೆ ನಿರ್ದೇಶಿಸುವುದು ಆಲ್ಗರಿದಮ್‌ನ ಕೆಲಸ. ಉಳಿಸಿಟ್ಟ ಕಡತದ ಮೇಲೆ ಕ್ಲಿಕ್ಕಿಸಿದಾಗ ಅದು ತೆಗೆದುಕೊಳ್ಳುವುದರಿಂದ ಹಿಡಿದು ಅತ್ಯಂತ ಕ್ಲಿಷ್ಟವಾದ ಸಮಸ್ಯೆಯನ್ನು ಬಿಡಿಸುವವರೆಗೆ ಕಂಪ್ಯೂಟರಿನಲ್ಲಿ ಯಾವ ಕೆಲಸ ಆಗಬೇಕಾದರೂ ಅದಕ್ಕೆ ಸಂಬಂಧಪಟ್ಟ ಪ್ರತಿಯೊಂದು ಹೆಜ್ಜೆಯನ್ನೂ ಆ ಪ್ರೋಗ್ರಾಮಿನ ಆಲ್ಗರಿದಮ್ ಪರಿಗಣಿಸಿರಬೇಕು. ಪ್ರೋಗ್ರಾಮ್ ಬರೆಯುವ ಮುನ್ನ ಅದರ ತರ್ಕ (ಲಾಜಿಕ್) ಹೇಗಿರಬೇಕು ಎನ್ನುವುದನ್ನು ಅಂತಿಮಗೊಳಿಸುವಲ್ಲಿ ಆಲ್ಗರಿದಮ್‌ನದೇ ಪ್ರಮುಖ ಪಾತ್ರ. ಪ್ರೋಗ್ರಾಮ್ ಬರೆಯಲು ಹೊರಟಿರುವುದು ಯಾವ ಭಾಷೆಯಲ್ಲೇ (ಸಿ++, ಜಾವಾ ಇತ್ಯಾದಿ) ಆಗಲಿ, ಆ ಕೆಲಸ ಶುರುಮಾಡುವ ಮೊದಲು ನಮ್ಮ ಉದ್ದೇಶಕ್ಕೆ ಹೊಂದುವ ಸಮರ್ಥ ಆಲ್ಗರಿದಮ್ ಅನ್ನು ಆರಿಸಿಕೊಳ್ಳುವುದು ಪ್ರೋಗ್ರಾಮಿಂಗ್‌ನ ಮಹತ್ವದ ಹೆಜ್ಜೆಗಳಲ್ಲೊಂದು. ವೇಗ, ಸಂಪನ್ಮೂಲದ ಬಳಕೆ, ಅನುಷ್ಠಾನದ ಜಟಿಲತೆ ಮುಂತಾದ ಅಂಶಗಳಮೇಲೆ ವಿವಿಧ ಆಲ್ಗರಿದಮ್‌ಗಳನ್ನು ಹೋಲಿಸಿ ಅವುಗಳ ಪೈಕಿ ಅತ್ಯಂತ ಸೂಕ್ತವೆಂದು ತೋರುವುದನ್ನಷ್ಟೆ ಆಯ್ದುಕೊಂಡು ಮುಂದುವರೆಯುವುದು ಸಾಮಾನ್ಯ ಅಭ್ಯಾಸ. ಹೀಗೆ ಆರಿಸಲಾದ ಆಲ್ಗರಿದಮ್‌ನ ತರ್ಕ ಎಷ್ಟು ಸಮರ್ಥವಾಗಿರುತ್ತದೋ ಅಂತಿಮವಾಗಿ ಸಿದ್ಧವಾಗುವ ಪ್ರೋಗ್ರಾಮಿನ ಸಾಮರ್ಥ್ಯದ ಪ್ರಮಾಣವೂ ಅಷ್ಟೇ ಇರುತ್ತದೆ.
7 ALU ಎಎಲ್‍ಯು ಅರ್ಥ್‌ಮೆಟಿಕ್ ಲಾಜಿಕ್ ಯುನಿಟ್; ಕಂಪ್ಯೂಟರ್, ಸ್ಮಾರ್ಟ್‌ಫೋನ್ ಮುಂತಾದ ವಿದ್ಯುನ್ಮಾನ ಸಾಧನಗಳ ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್‌ನ (ಸಿಪಿಯು) ಒಂದು ಭಾಗ. ದತ್ತಾಂಶ ಸಂಸ್ಕರಣೆಯಲ್ಲಿ ಅಗತ್ಯವಾದ ಅಂಕಗಣಿತ ಹಾಗೂ ತರ್ಕದ ಲೆಕ್ಕಾಚಾರಗಳನ್ನು ಮಾಡುವುದು ಇದರ ಜವಾಬ್ದಾರಿ. ಯಾವುದೇ ಕಂಪ್ಯೂಟರಿನ ಪ್ರಮುಖ ಅಂಗ ಅದರ ಕೇಂದ್ರೀಯ ಸಂಸ್ಕರಣ ಘಟಕ, ಅರ್ಥಾತ್ ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್ (ಸಿಪಿಯು) ಎನ್ನುವ ವಿಷಯ ಕಂಪ್ಯೂಟರ್ ವಿಜ್ಞಾನದ ಪ್ರಾಥಮಿಕ ಪಠ್ಯಗಳಲ್ಲೇ ಇರುತ್ತದೆ. ಕಂಪ್ಯೂಟರ್, ಸ್ಮಾರ್ಟ್‌ಫೋನ್ ಮುಂತಾದ ವಿದ್ಯುನ್ಮಾನ ಸಾಧನಗಳಲ್ಲಿ ನಡೆಯುವ ಅಪಾರ ಪ್ರಮಾಣದ ದತ್ತಾಂಶ ಸಂಸ್ಕರಣೆಯನ್ನು ನಿಭಾಯಿಸುವುದು ಇದರ ಜವಾಬ್ದಾರಿ. ದತ್ತಾಂಶವನ್ನು ಸಂಸ್ಕರಿಸುವ ಈ ಕೆಲಸದಲ್ಲಿ ಹಲವು ವಿಭಾಗಗಳಿರುತ್ತವೆ. ದತ್ತಾಂಶ ಸಂಸ್ಕರಣೆಯಲ್ಲಿ ಅಗತ್ಯವಾದ ಅಂಕಗಣಿತ ಹಾಗೂ ತರ್ಕದ ಲೆಕ್ಕಾಚಾರಗಳನ್ನು ಮಾಡುವುದು ಇಂತಹ ವಿಭಾಗಗಳಲ್ಲೊಂದು. ಸಿಪಿಯು ಒಳಗೆ ಇದನ್ನು ನಿರ್ವಹಿಸುವ ಜವಾಬ್ದಾರಿ ಎಎಲ್‌ಯು ಎಂಬ ಭಾಗದ್ದು. ಈ ಹೆಸರಿನ ಪೂರ್ಣರೂಪ 'ಅರ್ಥ್‌ಮೆಟಿಕ್ ಲಾಜಿಕ್ ಯುನಿಟ್' ಎಂದು. ಕೂಡಿಸುವ - ಕಳೆಯುವ ಸರಳ ಕೆಲಸಗಳಿಂದ ಪ್ರಾರಂಭಿಸಿ ಬೂಲಿಯನ್ ಆಲ್ಜೀಬ್ರಾದವರೆಗೆ ಎಲ್ಲ ಬಗೆಯ ಲೆಕ್ಕಾಚಾರಗಳನ್ನೂ ಇದು ನಿಭಾಯಿಸಬಲ್ಲದು. ಕಂಪ್ಯೂಟರಿನಲ್ಲಿರುವ ಯಾವುದೇ ಮಾಹಿತಿ ಅದಕ್ಕೆ ಅರ್ಥವಾಗುವುದು ದ್ವಿಮಾನ (ಬೈನರಿ) ಪದ್ಧತಿಯ ಅಂಕಿಗಳ ರೂಪದಲ್ಲಿದ್ದಾಗಲಷ್ಟೇ. ಹೀಗಾಗಿ ಎಎಲ್‌ಯುವಿನಲ್ಲಿ ನಡೆಯುವ ಲೆಕ್ಕಾಚಾರಗಳೂ ಇವೇ ಅಂಕಿಗಳನ್ನು ಬಳಸುತ್ತವೆ. ಕಂಪ್ಯೂಟರಿನಲ್ಲಿ, ಸ್ಮಾರ್ಟ್‌ಫೋನಿನಲ್ಲಿ ಸಿಪಿಯು ಕೆಲಸವನ್ನು ಅವುಗಳ ಪ್ರಾಸೆಸರ್ ಮಾಡುತ್ತದಲ್ಲ, ಅಂತಹ ಪ್ರತಿ ಪ್ರಾಸೆಸರ್‌ನಲ್ಲೂ ಎಎಲ್‌ಯು ಇರುತ್ತದೆ. ಉನ್ನತ ಗುಣಮಟ್ಟದ ಚಿತ್ರಗಳನ್ನು (ಗ್ರಾಫಿಕ್ಸ್) ಸಂಸ್ಕರಿಸಲು - ಪ್ರದರ್ಶಿಸಲು ಬಳಕೆಯಾಗುವ ಗ್ರಾಫಿಕ್ಸ್ ಪ್ರಾಸೆಸಿಂಗ್ ಯುನಿಟ್(ಜಿಪಿಯು)ನಲ್ಲೂ ಎಎಲ್‌ಯು ಇರುತ್ತದೆ.
8 Analytics ಅನಲಿಟಿಕ್ಸ್ ದತ್ತಾಂಶದ ಸಂಸ್ಕರಣೆ, ವಿಶ್ಲೇಷಣೆ ಹಾಗೂ ಅರ್ಥೈಸಿಕೊಳ್ಳುವಿಕೆಯ ಪ್ರಕ್ರಿಯೆ ಎಲ್ಲ ಕ್ಷೇತ್ರಗಳಲ್ಲೂ ತಂತ್ರಜ್ಞಾನದ ಬಳಕೆ ಪ್ರಾರಂಭವಾದ ನಂತರ ನಮ್ಮ ಪ್ರತಿ ಚಟುವಟಿಕೆಯ ಸುತ್ತಲೂ ಭಾರೀ ಪ್ರಮಾಣದ ದತ್ತಾಂಶ (ಡೇಟಾ) ಸೃಷ್ಟಿಯಾಗುತ್ತದೆ. ಮೊಬೈಲ್ ಫೋನ್ ಬಳಕೆಯ ವಿವರ ಇರಬಹುದು, ಬ್ಯಾಂಕಿನ ಜಮಾ-ಖರ್ಚುಗಳಿರಬಹುದು, ಅಂಗಡಿಯಲ್ಲಿ ಖರೀದಿಸಿದ ವಸ್ತುಗಳ ಪಟ್ಟಿಯೇ ಇರಬಹುದು - ನಮ್ಮ ದಿನನಿತ್ಯದ ವ್ಯವಹಾರ ಕುರಿತ ನೂರೆಂಟು ಬಗೆಯ ವಿವರಗಳು ಹೀಗೆ ದತ್ತಾಂಶದ ರೂಪದಲ್ಲಿ ಸಂಗ್ರಹವಾಗುತ್ತವೆ. ಸರಿಯಾಗಿ ಬಳಸಿದ್ದೇ ಆದರೆ ಇಷ್ಟೆಲ್ಲ ದತ್ತಾಂಶ ಬಹಳ ಉಪಯುಕ್ತವಾಗಬಲ್ಲವು. ಕಳೆದ ಆರು ತಿಂಗಳಿನಲ್ಲಿ ನಮ್ಮ ಗ್ರಾಹಕರು ತಲಾ ಎಷ್ಟು ಕರೆಗಳನ್ನು ಮಾಡಿದ್ದಾರೆ ಎಂದು ತಿಳಿಯುವ ಸಂಸ್ಥೆ ಅದರ ಆಧಾರದ ಮೇಲೆ ತನ್ನ ಮುಂದಿನ ಹೆಜ್ಜೆಗಳನ್ನು ರೂಪಿಸಿಕೊಳ್ಳಬಹುದು; ಬ್ಯಾಂಕಿನ ಜಮಾ - ಖರ್ಚುಗಳನ್ನು ತಾಳೆನೋಡಿದ ಆದಾಯ ತೆರಿಗೆ ಇಲಾಖೆ ಅದಕ್ಕೆಲ್ಲ ತೆರಿಗೆ ಪಾವತಿಯಾಗಿದೆಯೋ ಇಲ್ಲವೋ ಎಂದು ಪರೀಕ್ಷಿಸಬಹುದು; ಅಂಗಡಿಯಲ್ಲಿ ಯಾವ ಸಮಯದಲ್ಲಿ ಏನೆಲ್ಲ ಮಾರಾಟವಾಗುತ್ತಿದೆ ಎಂದು ತಿಳಿದುಕೊಳ್ಳುವ ಮಾಲೀಕ ಸಂದರ್ಭಕ್ಕೆ ಸರಿಯಾಗಿ ಆಯಾ ವಸ್ತುಗಳನ್ನು ತರಿಸಿಡಲೂ ಬಹುದು! ಇಷ್ಟೆಲ್ಲ ಆಗಬೇಕೆಂದರೆ ಸಂಬಂಧಪಟ್ಟ ದತ್ತಾಂಶವನ್ನು ಸರಿಯಾಗಿ ಸಂಸ್ಕರಿಸುವುದು, ವಿಶ್ಲೇಷಿಸುವುದು ಹಾಗೂ ಅರ್ಥೈಸಿಕೊಳ್ಳುವುದು ಸಾಧ್ಯವಾಗಬೇಕು. ಇದನ್ನೆಲ್ಲ ಸಾಧ್ಯವಾಗಿಸುವ ತಂತ್ರಗಳನ್ನು ಒಟ್ಟಾರೆಯಾಗಿ 'ಅನಲಿಟಿಕ್ಸ್' ಎಂದು ಗುರುತಿಸಲಾಗುತ್ತದೆ. ಕಂಪ್ಯೂಟರ್ ತಂತ್ರಾಂಶಗಳ ಜೊತೆಗೆ ಸಂಖ್ಯಾವಿಜ್ಞಾನ (ಸ್ಟಾಟಿಸ್ಟಿಕ್ಸ್) ಕೂಡ ಇಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತದೆ. ಅನಲಿಟಿಕ್ಸ್‌ನ ಅಂಗವಾಗಿ ದತ್ತಾಂಶವನ್ನು ಸಂಸ್ಕರಿಸಿ ಸಿದ್ಧಪಡಿಸುವ ಮಾಹಿತಿಯನ್ನು ಸಂಸ್ಥೆಗಳ ವ್ಯವಹಾರದ ನಿರ್ಧಾರಗಳಲ್ಲಿ ಬಳಸುವುದು ಸರ್ವೇಸಾಮಾನ್ಯ. ವ್ಯವಹಾರದಲ್ಲಿ ಸದ್ಯ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುವುದಷ್ಟೇ ಅಲ್ಲ, ಇಂದಿನ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಮುಂದೆ ಏನು ನಡೆಯಬಹುದು ಎಂದು ಊಹಿಸುವುದು - ಮುಂದೆ ಇಂತಹ ಫಲಿತಾಂಶ ಬೇಕೆಂದರೆ ಏನು ಮಾಡಬೇಕೆಂದು ಸೂಚಿಸುವುದು ಕೂಡ ಅನಲಿಟಿಕ್ಸ್ ಸಹಾಯದಿಂದ ಸಾಧ್ಯವಾಗುತ್ತದೆ.
9 Antivirus ಆಂಟಿವೈರಸ್ ಕುತಂತ್ರಾಂಶಗಳ (ಮಾಲ್‌ವೇರ್) ಕಾಟದಿಂದ ಪಾರಾಗಲು ನೆರವಾಗುವ ತಂತ್ರಾಂಶ ನಮ್ಮ ಕಂಪ್ಯೂಟರ್ ಹಾಗೂ ಮೊಬೈಲ್ ಫೋನುಗಳನ್ನೆಲ್ಲ ಕಾಡುವ ಕುತಂತ್ರಾಂಶಗಳಿಂದ (ಮಾಲ್‌ವೇರ್) ಪಾರಾಗಲು ನೆರವಾಗುವ ತಂತ್ರಾಂಶವೇ ಆಂಟಿವೈರಸ್. ಕುತಂತ್ರಾಂಶಗಳನ್ನು ಗುರುತಿಸಿ ಅವು ನಮ್ಮ ಕಂಪ್ಯೂಟರ್ ಅಥವಾ ಮೊಬೈಲಿಗೆ ಏನೂ ತೊಂದರೆಮಾಡದಂತೆ ತಡೆಯುವುದು ಈ ತಂತ್ರಾಂಶದ ಕೆಲಸ. ಆಂಟಿವೈರಸ್‌ಗಳ ಕೆಲಸ ನಡೆಯುವುದು ಕುತಂತ್ರಾಂಶಗಳ ಬಗ್ಗೆ ಸಮಗ್ರ ಮಾಹಿತಿ ಹೊಂದಿರುವ ದತ್ತಸಂಚಯವನ್ನು (ಡೇಟಾಬೇಸ್) ಆಧರಿಸಿಕೊಂಡು. ವೈರಸ್ ವಿರೋಧಿ ತಂತ್ರಾಂಶ ರೂಪಿಸುವ ಸಂಸ್ಥೆಗಳು ಯಾವೆಲ್ಲ ಕುತಂತ್ರಾಂಶಗಳನ್ನು ಪತ್ತೆಮಾಡಿರುತ್ತವೆಯೋ ಅವೆಲ್ಲವುಗಳ 'ಸಿಗ್ನೇಚರ್', ಅರ್ಥಾತ್ ಗುಣಲಕ್ಷಣಗಳನ್ನು ಇಂತಹ ದತ್ತಸಂಚಯಗಳಲ್ಲಿ ಸಂಗ್ರಹಿಸಲಾಗಿರುತ್ತದೆ. ಹೊಸಹೊಸ ಕುತಂತ್ರಾಂಶಗಳು ಪತ್ತೆಯಾದಂತೆಲ್ಲ ಅವುಗಳ ಬಗೆಗಿನ ಮಾಹಿತಿ ಈ ದತ್ತಸಂಚಯವನ್ನು ಸೇರಿಕೊಳ್ಳುತ್ತದೆ (ನಿರ್ದಿಷ್ಟ ಪರೀಕ್ಷೆಗಳ ಮೂಲಕ ಹೊಸ ಕುತಂತ್ರಾಂಶಗಳನ್ನು ತಡೆಯುವ ಚಾಕಚಕ್ಯತೆಯೂ ಹಲವು ಆಂಟಿವೈರಸ್‌ಗಳಲ್ಲಿರುತ್ತದೆ). ಆಂಟಿವೈರಸ್ ತಂತ್ರಾಂಶಗಳನ್ನು ಆಗಿಂದಾಗ್ಗೆ ಅಪ್‌ಡೇಟ್ ಮಾಡಿಕೊಳ್ಳುತ್ತಿರಬೇಕು ಎನ್ನುವುದು ಇದೇ ಕಾರಣಕ್ಕಾಗಿ. ಹೀಗೆ ಮಾಡುವುದರಿಂದ ಹೊಸ ಕುತಂತ್ರಾಂಶಗಳ ಬಗೆಗಿನ ಮಾಹಿತಿ ನಮ್ಮ ಕಂಪ್ಯೂಟರ್‌ನಲ್ಲಿರುವ ವೈರಸ್ ವಿರೋಧಿ ತಂತ್ರಾಂಶಕ್ಕೂ ಸಿಗುವಂತೆ ಮಾಡಬಹುದು. ಇದರಿಂದಾಗಿ ನಮ್ಮ ಕಂಪ್ಯೂಟರ್ ಅನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಸಾಧ್ಯ. ಅಷ್ಟೇ ಅಲ್ಲ, ನಮ್ಮ ಕಂಪ್ಯೂಟರ್‌ನಿಂದ ಕುತಂತ್ರಾಂಶಗಳು ಇತರೆಡೆಗೂ ಹರಡಿ ಬೇರೆಯವರಿಗೆ ತೊಂದರೆಯಾಗುವುದನ್ನು ಕೂಡ ತಪ್ಪಿಸಬಹುದು.
10 API ಎಪಿಐ ಅಪ್ಲಿಕೇಶನ್ ಪ್ರೋಗ್ರಾಮ್ ಇಂಟರ್‌ಫೇಸ್; ಎರಡು ತಂತ್ರಾಂಶಗಳ ನಡುವೆ ಮಾಹಿತಿಯ ವಿನಿಮಯ ಸಾಧ್ಯವಾಗಿಸುವ ವ್ಯವಸ್ಥೆ ಮಾಹಿತಿ ತಂತ್ರಜ್ಞಾನದ ಬಳಕೆಯಿಂದ ನೂರೆಂಟು ಬಗೆಯ ಕೆಲಸಗಳನ್ನು ಸುಲಭವಾಗಿ ಸಾಧಿಸಿಕೊಳ್ಳಬಹುದು. ಇದಕ್ಕೆಲ್ಲ ಬೇಕಾದ ತಂತ್ರಾಂಶಗಳನ್ನು (ಸಾಫ್ಟ್‌ವೇರ್) ಸಿದ್ಧಪಡಿಸುವುದು ತಂತ್ರಾಂಶ ಪರಿಣತರ ಕೆಲಸ. ಯಾವುದೇ ತಂತ್ರಾಂಶವಾದರೂ ಅದರಿಂದ ನಿರ್ದಿಷ್ಟವಾದ ಕೆಲ ಅಪೇಕ್ಷೆಗಳಿರುತ್ತವೆ. ಅಂತಹ ಪ್ರತಿಯೊಂದು ಅಪೇಕ್ಷೆಯನ್ನೂ ನಾವು ಸಿದ್ಧಪಡಿಸುವ ಹೊಸ ತಂತ್ರಾಂಶವೇ ಪೂರೈಸಬೇಕು ಎಂದೇನೂ ಇಲ್ಲ. ನಮ್ಮ ತಂತ್ರಾಂಶ ಮಾಡಬೇಕಾದ ಕೆಲಸದ ಒಂದು ಭಾಗವನ್ನು ಚೆಂದವಾಗಿ ಮಾಡಬಲ್ಲ ಇನ್ನೊಂದು ತಂತ್ರಾಂಶ ಈಗಾಗಲೇ ಇದೆ ಎನ್ನುವುದಾದರೆ ನಮ್ಮ ತಂತ್ರಾಂಶ ಅದರ ಸೇವೆಯನ್ನು ಪಡೆದುಕೊಳ್ಳುವುದು ಸಾಧ್ಯ. ಇದರ ಅರ್ಥ ಬೇರೊಬ್ಬರ ತಂತ್ರಾಂಶವನ್ನು ಕದ್ದು ಅಥವಾ ಕಾಪಿಹೊಡೆದು ಬಳಸುವುದು ಎಂದಲ್ಲ. ಎರಡು ತಂತ್ರಾಂಶಗಳ ನಡುವೆ ಮಾಹಿತಿಯ ವಿನಿಮಯ ಸಾಧ್ಯವಾದರೆ ಅವು ಒಟ್ಟಿಗೆ ಕೆಲಸಮಾಡಬಲ್ಲವು ಎನ್ನುವುದು ಇಲ್ಲಿರುವ ಆಲೋಚನೆ. ಇದನ್ನು ಸಾಧ್ಯವಾಗಿಸುವ ಪರಿಕಲ್ಪನೆಯೇ ಎಪಿಐ, ಅರ್ಥಾತ್ 'ಅಪ್ಲಿಕೇಶನ್ ಪ್ರೋಗ್ರಾಮ್ ಇಂಟರ್‌ಫೇಸ್'. ಕಾರ್ಯಾಚರಣ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ) ಸೇರಿದಂತೆ ಬೇರೊಂದು ತಂತ್ರಾಂಶದಲ್ಲಿರುವ ಸೌಲಭ್ಯವನ್ನು ನಮ್ಮ ತಂತ್ರಾಂಶದಲ್ಲಿ ಬಳಸಿಕೊಳ್ಳಬೇಕು ಎಂದಾಗ ಎಪಿಐಗಳು ನಮಗೆ ನೆರವಾಗುತ್ತವೆ. ಆಯಾ ತಂತ್ರಾಂಶದ ನಿರ್ಮಾತೃಗಳು ರೂಪಿಸಿರುವ ವಿನ್ಯಾಸಕ್ಕೆ ಅನುಗುಣವಾಗಿ ನಮ್ಮ ತಂತ್ರಾಂಶ ಅಲ್ಲಿಗೆ ಮಾಹಿತಿ ರವಾನಿಸಿದರೆ ನಿರ್ದಿಷ್ಟ ರೂಪದ ಫಲಿತಾಂಶ ನಮಗೆ ಅಲ್ಲಿಂದ ದೊರಕುತ್ತದೆ. ಈ ಸೇವೆ ಕೆಲವುಬಾರಿ ಉಚಿತವಾಗಿ ದೊರೆತರೆ ಇನ್ನು ಕೆಲ ಉದಾಹರಣೆಗಳಲ್ಲಿ ಇದಕ್ಕಾಗಿ ಹಣನೀಡಬೇಕಾಗಬಹುದು. ಕಂಪ್ಯೂಟರಿನಲ್ಲಿ ಕ್ಲಿಕ್ ಮಾಡುವುದು - ಮೊಬೈಲ್ ಪರದೆಯನ್ನು ಮುಟ್ಟಿದ್ದೆಲ್ಲ ತಂತ್ರಾಂಶಗಳಿಗೆ ಗೊತ್ತಾಗುತ್ತದಲ್ಲ, ಅಂತಹ ಉದಾಹರಣೆಗಳಲ್ಲೆಲ್ಲ ಬಳಕೆಯಾಗುವುದು ಇಂತಹ ಎಪಿಐಗಳೇ. ನಮ್ಮ ಜಾಲತಾಣದಲ್ಲಿ ನೇರವಾಗಿ ಕನ್ನಡದಲ್ಲೇ ಟೈಪಿಸುವುದು ಸಾಧ್ಯವಾಗಬೇಕು ಎನ್ನುವವರು ಅಲ್ಲಿ ಗೂಗಲ್ ಟ್ರಾನ್ಸ್‌ಲಿಟರೇಟ್ ಸೌಲಭ್ಯ ನೀಡುತ್ತಾರಲ್ಲ, ಅದು ಕೆಲಸಮಾಡುವುದೂ ಎಪಿಐ ಮೂಲಕವೇ.